ಅವಳ ಅಳು.


ಮನದಡಿಯ ನೋವುಗಳು,
ಅಳುವಾಗಿ ಹರಿದವು.
ಅತ್ತರಷ್ಟೇ ಆವಳಿಗೆ ಸಮಾಧಾನ.
ದುಃಖಗಳೆಲ್ಲದರ ಅವಸಾನ.

ಅಳುವುದಕ್ಕೂ ಅಳುಕಿವಳಲ್ಲಿ,
ಯಾರು ನೋಡುವರೋ ಎಂದು.
ನೋಡಿ ಎನೆನ್ನುವರೋ ಎಂದು.
ಸೆರಗಿನ ಹಿಂದೆ, ಪರದೆಯ ಹಿಂದೆ,
ಅಳುವಳಿವಳು ದೇವರ ಮುಂದೆ.
ಕೋಣೆಗೆ ನುಸುಳಿ, ದೀಪವಾರಿಸಿ,
ಮಂಚವ ಸೇರುವಳು,
ದಿಂಬಿಗೆ ತಲೆ ಇರಿಸುವಳು,
ಮೆಲ್ಲಗೆ ರೋದಿಸುವಳು.

ಮುಚ್ಚಿಡುವಳು ತನ್ನ ದುಃಖವ ಎಲ್ಲರಿಂದ.
ಮನೆಗೆಲಸದಲ್ಲಿ ತೊಡಗಿ , ಹೊರಬರುವಳು ಅದರಿಂದ.
ಯಾರಾದರು ಕಂಡರೆ, ಯಾಕಳುವೆ ಎಂದರೆ,
ಕಣ್ಣಲ್ಲಿ ಧೂಳು ಬಿತ್ತು. ಉರಿ, ಎಂದು ನೆಪ ಬೇರೆ.

ಇವಳ ಚಿಂತೆಗಳಿಗೆ ಕೊನೆಯಿಲ್ಲ.
ಅಳುವಿಗೆ ಸ್ಪಷ್ಟ ಕಾರಣವಿಲ್ಲ.
ದುಃಖಕ್ಕೂ ಅಳುವಳೀ ನೀರೆ,
ಸಂತಸಕ್ಕೂ ಹರಿಸುವಳು ಅಶ್ರುಧಾರೆ.

ನಗುವೆಂಬ ಮುಸುಕಿನ ಹಿಂದೆ, ಅಳುವು ಅಡಗಿದೆ,
ಅಳುವಿನ ಕುಸುಕುಸು ದನಿ ಸೌಮ್ಯ ಹಾಡಾಗಿದೆ.

ಹುದುಗಿರುವ ನೋವದು, ನೋವಾಗಿಯೇ ಕೊನೆಯಾಗುವುದು,
ಪ್ರಶ್ನೆಗಳಿಗೆ ಸವಾಲಾಗೇ ಉಳಿಯುವುದು.
ತನ್ನ ದುಃಖವ ತಾನೆ ಅನುಭವಿಸುವಳು,
ಮನದ ನೋವನು ತಾನೆ ನುಂಗುವಳು.
ಕ್ಷಮೆ, ಲಜ್ಜೆ, ಮಮತೆಯ ಸಂಕೇತ ಹೆಣ್ಣು,
ಅಳುವಿಗೆ ನಿಜ ಅರ್ಥ ಕೊಡುವಳು ಹೆಣ್ಣು.
ಇವಳ ಮೌನವ ನಿರ್ಲಕ್ಷಿಸದಿರಿ,
ಇವಳ ಭಾವನೆಗಳ ಕಡೆಗಾಣಿಸದಿರಿ.
ಇವಳ ಅಂತರಂಗದ ನೋವ ಅರಿಯಿರಿ,
ಇವಳ ಅಗಾಧ ವ್ಯಕ್ತಿತ್ವವ ಗುರುತಿಸಿರಿ.

Comments

Popular posts from this blog

ನೆಗಡಿ.

Voice of Kannada

ಚಪಲ.