ಘಮಂಡಿ.
ನಕ್ಕಾಗ ಅವಳು ಮುತ್ತುದುರುವುದು, ನಡೆದಾಗ ಅವಳು ಮೊಗ್ಗರಳುವುದು. ಹಾಲಿನಂತೆ ಶ್ವೇತ ವರ್ಣದವಳು, ಕುಸುಮದಂತೆ ಸುಕೋಮಲೆ ಇವಳು. ಸಂಪಿಗೆ ಮೂಗು, ನೀಳ ಕಾಯವದು, ಅಪರಿಚಿತನನ್ನು ಸೆಳೆವ ನಯನ ಮಾಯೆಯದು. ಬಳುಕುವಳು ಲತೆಯಂತೆ, ನಡೆಯುವಳು ಹಂಸೆಯಂತೆ, ಅವಳದೊಂದು ಸ್ಪರ್ಶ ಕಾಳ್ಗಿಚ್ಚಿನಂತೆ. ಕಾಣುವರೆಲ್ಲರು ಅವಳದೆ ಕನಸು, ಆವರಿಸಿರುವಳಾಕೆ ಇವರೆಲ್ಲರ ಮನಸು. ಹಾಡುವರೆಲ್ಲರು ಅವಳ ಸೌಂದರ್ಯದ ಗಾನ, ಮಾಡುವರೆಲ್ಲರು ಅವಳ ಮೈಮಾಟದ ಗುಣಗಾನ. ಇವಳ ನೋಡಿ ನೇಸರ ತಾಪವ ಕರಗಿಸುವನು, ಇವಳಿಗಾಗಿ ಚಂದಿರ ಶೀತಲ ಬೆಳಕ ಬೀರುವನು. ಕಾಯುವರು ಆವಳ ನೋಟವ ಕಾತುರದಿಂದ, ಬರುವಳು ವಯ್ಯಾರಿ ಬಲು ಜಂಭದಿಂದ. ಸುರ ಸುಂದರಿಯೆಂದು ತಿಳಿದಿರುವಳೀಕೆ, ಯಾರೇ ಮಾತಾಡಿಸಿದರು ಮುಖ ತಿರುಗಿಸುವಳೀಕೆ. ಸ್ವಭಾವದಲ್ಲೀಕೆ ಬಹಳ ಘಮಂಡಿ, ಆಗೊಮ್ಮೆ ಈಗೊಮ್ಮೆ ಆಗುವಳು ರಣಚಂಡಿ. ತಿಳಿದಿರುವರೆಲ್ಲರು ಈ ಪೋರಿ ನಾಜೂಕೆಂದು, ತಿಳಿಯರು ಇವರು ಈ ನಾರಿಯ ನಾಲಗೆ ಯೆಷ್ಟು ಚೂಪೆಂದು. ಇರುವರು ಇಂಥವರು ಸಾಕಷ್ಟು ಜನ ನಮ್ಮ ನಡುವಿನಲಿ, ಸ್ವಾಭಿಮಾನದ ಹೆಸರಲ್ಲಿ ತೇಲುತಿಹರು ಅಹಮ್ಮಿನಲಿ. ನೀವಾದರು ಅಂತರಂಗದ ಸುಂದರತೆಯ ಅಳೆಯಿರಿ, ಬರೀ ಬಾಹ್ಯ ಸೌಂದರ್ಯಕ್ಕೆ ಮಾರುಹೋಗದಿರಿ.