Posts

Showing posts from February, 2008

ನೆನಪುಗಳು.

Image
ಬರಿದಾದ ಮನದಲಿ , ಆಲಸ್ಯದ ಮಡುವಲಿ, ಕುಂಟುತ ಬಂದವು ನೆನಪುಗಳು, ನೆನೆಸಲು ಕಳೆದುಹೋದ "ಆ ದಿನಗಳು". ಕೆಲ ಜನಗಳ, ಕೆಲ ಸ್ಥಳಗಳ, ಕೆಲ ಮನಗಳ, ಕೆಲ ದಿನಗಳ, ಸುತ್ತ ಹರಿಹಾಯ್ದವು ಆ ನೆನಪುಗಳು, ಮತ್ತೆ ಕಲ್ಪನೆಯ ಲೋಕವ ವಿಸ್ತರಿಸಲು. ಬೇಡೆನಿಸಿದ ಮಾತುಗಳ ಕೇಳಿಸಿ, ಇಷ್ಟವಾಗದ ಸನ್ನಿವೇಶವ ಬಣ್ಣಿಸಿ, ಮನದಂಗಳದಿ ಬೇಸರಿಕೆಯ ರಂಗೋಲಿಯ ಬಿಡಿಸಿದವು ಆ ನೆನಪುಗಳು, ಸಾಕೆಂದರೂ ಛೇಡಿಸಿ ಮರೆಯಾದವು ಆ ನೆನಪುಗಳು. ಸರಿದ ಅನುಭವಗಳ ಅವಶೇಷಗಳಡಿಯಿಂದ, ಕದ್ದು ತರುವುದು , ಮರೆತ ಆ ಸುಂದರ ಕ್ಶಣವ. ತುಟಿಯಂಚಲಿ ನಗುವಾಗಿ , ವಿಶ್ವಾಸದ ಅಲೆಯಾಗಿ, ನಲಿಸುವುದು , ನಗಿಸುವುದು ನೊಂದ ಈ ಮನವ. ಏಕಾಂಗಿತನದ ಸಂಗಾತಿಯು ಈ ನೆನೆಪುಗಳು, ಏಕೀಕರಣಕೆ ಕಾರಣವೂ ಈ ನೆನೆಪುಗಳು. ನೆನಪಿರಲಿ , ಕಹಿ ನೆನಪುಗಳ ಹರಿವಿಗೆ ಕಡಿವಾಣವಿರಲಿ. ಸೊಗಸಾದ ಸಿಹಿ ನೆನಪುಗಳೆಂದೂ ಬತ್ತದಿರಲಿ.